ಮೂರ್, ಜಾರ್ಜ್ ಅಗಸ್ಟಸ್
1852-1933. ಐರ್ಲೆಂಡಿನ ಇಂಗ್ಲೀಷ್ ಕವಿ. ಕಾದಂಬರಿಕಾರ. ನಾಟಕಕಾರ ಹಾಗೂ ವಿಮರ್ಶಕ. ಐರ್ಲೆಂಡಿನ ಮೇಯೊ ಕೌಂಟಿಯ ಮೂರ್ ಹಾಲ್‍ನಲ್ಲಿ 1852ರಲ್ಲಿ ಜನಿಸಿದ. ತಂದೆ ಜಾರ್ಜ್ ಹೆನ್ರಿ, ಜಮೀನ್ದಾರನೂ ರೇಸ್ ಕುದುರೆ ಮಾಲೀಕನೂ ಮೇಯೋ ಕೌಂಟಿಯಿಂದ ಆಯ್ಕೆಯಾದ ಪಾರ್ಲಿಮೆಂಟ್ ಸದಸ್ಯನೂ ಆಗಿದ್ದ. ತಾಯಿ ಮೇರಿ ಬ್ಲೇಕ್, ಜ್ಯೇಷ್ಠ ಪುತ್ರನಾಗಿದ್ದ ಮೂರ್‍ನನ್ನು ಬರ್ಮಿಂಗಹೆಮ್ ಬಳಿಯ ಎಸ್ಕಾಟ್ ಶಾಲೆಗೆ ಸೇರಿಸಿದರು. ಆ ಶಾಲೆಯ ಕಠಿಣ ಶಿಸ್ತು ಮತ್ತು ವ್ಯಾಕರಣ ದೋಷ, ಕಾಗುಣಿತದ ತಪ್ಪುಗಳನ್ನು ಸದಾ ಎತ್ತಿ ಹಿಡಿದು ಕಟುವಾಗಿ ಬೈಯುತ್ತಿದ್ದ ಮುಖ್ಯೋಪಾಧ್ಯಾಯನಿಂದಾಗಿ ಮೂರ್‍ನಿಗೆ ಶಾಲೆ, ವಿದ್ಯಾಭ್ಯಾಸ ಎಂದರೆ ದ್ವೇಷ ಉಂಟಾಯಿತು. ಹದಿನೈದು ಹದಿನಾರು ವರ್ಷದವನಾದಾಗ ಶಾಲೆಯನ್ನು ಬಿಟ್ಟು ಲಂಡನ್ನಿಗೆ ಹೋದ. ಅಲ್ಲಿ ತನ್ನಂತೆಯೆ ಶಾಲೆಯನ್ನೊಲ್ಲದ ಗೆಳೆಯರೊಂದಿಗೆ ಸ್ವಚ್ಛಂದವಾಗಿ ಕಾಲ ಕಳೆದ. ತಂದೆ ತೀರಿಹೋದ ಅನಂತರ (1870) ನಾಲ್ಕು ಸಾವಿರ ಪೌಂಡ್ ವಾರ್ಷಿಕ ಆದಾಯವಿದ್ದ ಆಸ್ತಿಗೆ ಹಕ್ಕುದಾರನಾದ. ಆಸ್ತಿಯ ಮೇಲ್ವಿಚಾರಣೆಯಲ್ಲಿ ಉದಾಸೀನನಾಗಿದ್ದ ಈತನಿಗೆ ವಾಸ್ತವವಾಗಿ ಕೈಸೇರುತ್ತಿದ್ದುದು ನಾನೂರು ಐನೂರು ಪೌಂಡು ಮಾತ್ರ. ಕಲೆಯ ಬಗ್ಗೆ ಆಸಕ್ತಿ ತಾಳಿ ಪ್ಯಾರಿಸ್ಸಿಗೆ ಹೋಗಿ ಚಿತ್ರಕಲಾ ಶಾಲೆಯನ್ನು ಸೇರಿದ. ದೊಡ್ಡ ಚಿತ್ರಕಲಾವಿದನಾಗುವ ಲಕ್ಷಣಗಳೇನೂ ಕಾಣವಿದ್ದರೂ ಈತನಲ್ಲಿ ಕಲಾಪ್ರಜ್ಞೆ ವಿಕಾಸಗೊಂಡಿತು. ಕಲಾಭಿರುಚಿಗೆ ಒಂದು ಶಾಸ್ತ್ರೀಯ ಕಲಾಶಿಕ್ಷಣದ ಶಿಸ್ತು ಬಂದಿತು. ಈ ನಡುವೆ ಕವನಗಳ ರಚನೆ, ನಾಟಕಗಳ ರಚನೆಗಳ ಕಡೆ ಒಲವು ಹರಿಯಿತು. ಲೋಪೆಜ್ ಎಂಬ ಮಿತ್ರನ ಜೊತೆಗೆ ಸೇರಿ ಮಾರ್ಟಿನ್ ಲೂಥರ್ ಎಂಬ ನಾಟಕವನ್ನು ಬರೆದ.

	ಪ್ಯಾರಿಸ್ಸಿನಲ್ಲಿ ಒಂಬತ್ತು ವರ್ಷಕಳೆದರೂ ಹೋದ ಉದ್ದೇಶ ಈಡೇರಲಿಲ್ಲ. ಆದರೆ ಈತ ಎರಡು ಪ್ರಬಲವಾದ ಹೊಸ ಅಲೆಗಳ ಪ್ರಭಾವಕ್ಕೆ ಒಳಗಾದ. ಒಂದು, ಕಲಾಲೋಕದಲ್ಲಿ ಹುಟ್ಟಿಕೊಂಡ ಇಂಪ್ರೆಷನಿಸಮ್: ಎರಡನೆಯದು, ಸಾಹಿತ್ಯಲೋಕವನ್ನು ಚಕಿತಗೊಳಿಸಿದ್ದ ನ್ಯಾಚುರಲಿಸಮ್. ಈ ಹೊಸ ಅಲೆಗಳ ಪ್ರವರ್ತಕರಾಗಿದ್ದ ಮಲ್ಲಾರ್ಮೆ, ಎಮಿಲ್ ಜೋಲಾ ಮುಂತಾದವರ ಪರಿಚಯವನ್ನು ಮಾಡಿಕೊಂಡ. ಇನ್ನೂ ಪ್ರತಿಭೆ ಅರಳದ, ತನ್ನ ಮಾಧ್ಯಮ ಯಾವುದು ಎಂದು ನಿರ್ಧಾರವಾಗಿರದಿದ್ದ ಆ ದಿನಗಳಲ್ಲೂ ಸಾಹಿತ್ಯ ಕಲೆಗಳಲ್ಲಿ ತಾನೊಬ್ಬ ಗಣ್ಯವ್ಯಕ್ತಿ ಎಂಬ ಧೋರಣೆಯಲ್ಲಿ ಈತನಿದ್ದ. ತಾನೊಬ್ಬ ಪ್ರತಿಭಾವಂತ ಎಂದು ಭಾವಿಸಿದ್ದ ಈತನಿಗೆ ಭಾಷೆಯ ಮೇಲೆ ಹಿಡಿತವಿರಲಿಲ್ಲ. ಈತನ ಬರವಣಿಗೆಯಲ್ಲಿ ವ್ಯಾಕರಣ ಹಾಗೂ ಕಾಗುಣಿತದ ದೋಷಗಳು ಹೇರಳವಾಗಿದ್ದವು.

ಫ್ಲವರ್ಸ್ ಆಫ್ ಫ್ಯಾಷನ್ ಎಂಬ ಇವನ ಪ್ರಥಮ ಕವನಸಂಕಲನ 1878ರಲ್ಲಿ ಪ್ರಕಟವಾಯಿತು. ಅದೊಂದು ಪ್ರಯತ್ನ ಎಂಬ ಮನ್ನಣೆಗೆ ಮಾತ್ರ ಪಾತ್ರವಾಯಿತು. 1879ರಲ್ಲಿ ಪ್ಯಾರಿಸ್‍ನಿಂದ ಐರ್ಲೆಂಡಿಗೆ ಹಿಂತಿರುಗಿದ ಈತ ಸಾಹಿತ್ಯ ಸಂಬಂಧವಾಗಿ ಲಂಡನ್ನಿನ ಸಂಪರ್ಕವಿರಿಸಿಕೊಂಡಿದ್ದ. ಸ್ಪೆಕ್ಷೇಟರ್ ಪತ್ರಿಕೆಯಲ್ಲಿ ಇವನ ಕೆಲವು ಕವನಗಳು ಪ್ರಕಟವಾದವು. ಎಕ್ಷಾಮಿನರ್ ಪತ್ರಿಕೆಯಲ್ಲಿ ತಾತ್ಕಾಲಿಕ ಉದ್ಯೋಗವೂ ದೊರೆಯಿತು. 1882ರಲ್ಲಿ ಪೇಗನ್ ಪೊಯಯ್ಸ್ ಪ್ರಕಟವಾಯಿತು. ಆದರೆ ಕಾವ್ಯ ಮಾಧ್ಯಮ ಈತನಿಗೆ ಅಷ್ಟಾಗಿ ಒಗ್ಗಿ ಬರಲಿಲ್ಲ. ಹಾಗಾಗಿ ಗದ್ಯ ರಚನೆಗೆ, ಅದರಲ್ಲಿಯೂ ಕಾದಂಬರಿಗಳ ರಚನೆಗೆ ತೊಡಗಿದ. ವಿಕ್ಟೋರಿಯಾ ಯುಗದ ಸಂಕೋಲೆಗಳಿಂದ ಕಾದಂಬರಿಯನ್ನು ಬಿಡುಗಡೆ ಮಾಡುವ ಕಾರ್ಯ ತನ್ನದೆಂದು ಭಾವಿಸಿ ಜೋಲಾ ಮಾದರಿಯ ನಿಸರ್ಗವಾದಿ ಕಾದಂಬರಿಯನ್ನು ಬರೆಯಲಾರಂಭಿಸಿದ. ಹಾಗೆ ಬರೆದ ಮಾಡರ್ನ್ ಲವರ್ (1883) ಅಷ್ಟು ಯಶಸ್ವಿಯಾಗಿದ್ದರೂ ಮೊದಲ ಹೆಜ್ಜೆಯಾಯಿತು. 1885ರಲ್ಲಿ ಬಂದ ಎ ಮಮ್ಮರ್ಸ್ ವೈಫ್ ಎಂಬ ಕಾದಂಬರಿ ಈತನಿಗೆ ಯಶವನ್ನು ತಂದಿತು. ಆದರೂ ಅದು ನಿರ್ದಿಷ್ಟವಾದ ಕೃತಿಯೇನಲ್ಲ; ನಿಸರ್ಗವಾದಿ ಮಾದರಿಯದು ಎಂಬ ಹೊಸತನಕ್ಕಾಗಿ ಮಾತ್ರ ಮನ್ನಣೆ ಪಡೆಯಿತು. ಅದೇ ಕಾಲದಲ್ಲಿ ಬಂದ ಪೊಯೆಮ್ಸ ಅ್ಯಂಡ್ ಬ್ಯಾಲೆಡ್ಸ್ ಕಾದಂಬರಿ ಕೂಡ ಚಕಿತಗೊಳಿಸಿ ಕಾವ್ಯ ವಿಮರ್ಶಕರ ಗಮನವನ್ನು ಸೆಳೆಯಿತು. ಅನಂತರ ಪ್ರಕಟವಾದ ಕನ್ಫೆಷನ್ಸ್ ಆಫ್ ಎ ಯಂಗ್‍ಮ್ಯಾನ್ (1888) ಎಂಬ ಕೃತಿ ಹೆಚ್ಚು ಜನಪ್ರಿಯವಾಯಿತು. ಆದರೆ ಅಕಾಡಮಿ ಈ ಕೃತಿಯನ್ನು ಕಟುವಾಗಿ ಟೀಕಿಸಿತ್ತು. ಅನಂತರ ಬಂದ ಸ್ಪ್ರಿಂಗ್ ಡೇಸ್ (1888), ಮೈಕ್ ಫ್ಲೆಚರ್ (1889) ಎಂಬ ಕೃತಿಗಳು ವಿಫಲ ಪ್ರಯತ್ನಗಳಾದವು. 1891-95ರ ಅವಧಿಯಲ್ಲಿ ಸ್ಪೀಕರ್ ಪತ್ರಿಕೆಯ ಕಲಾವಿಮರ್ಶಕನಾಗಿ ಈತ ಕೆಲವು ಅವಲೋಕಗಳನ್ನೂ ಬರೆದ.

	ಹೀಗೆ ಹಲವು ವ್ಯರ್ಥ ಆದರೆ ಸತತ ಪ್ರಯತ್ನಗಳಿಂದ ಬರವಣಿಗೆ ಪಳಗಿ ಪಕ್ವವಾಗತೊಡಗಿತು. ಅನಂತರ ಬಂದ ಎಸ್ತರ್ ವಾಟರ್ಸ್ (1894) ಎವಿಲಿನ್ ಇನ್ನೆಸ್ (1898) ಸಿಸ್ಟರ್ ಟೆರೆಸಾ (1901) ಎಂಬ ಮೂರು ಕಾದಂಬರಿಗಳು ಇವನ ಶ್ರೇಷ್ಠ ಕೃತಿಗಳು ಎನಿಸಿದವು. ಈತನ ಮೊದಲ ಕಾದಂಬರಿ ಮೂಡಿಸಿದ್ದ ಭರವಸೆಯನ್ನು ಈ ಕೃತಿಗಳು ಈಡೇರಿಸಿದ್ದವು. ಫ್ರೆಂಚ್ ಕಾದಂಬರಿ ಹೊಸ ಬೆಳಸನ್ನೇ ಇಂಗ್ಲಿಷ್ ನೆಲದಲ್ಲಿ ಹಾಕಿ ಬೆಳೆಸಿದಂತೆ ಕಂಡರೂ ಹೆನ್ರಿಫೀಲ್ಡಿಂಗ್‍ನ ಸಂಪ್ರದಾಯವನ್ನೇ ಮೂರ್ ಪುನಶ್ಚೇತನಗೊಳಿಸಿದ್ದ. ಸರಳವಾದ ಅಚ್ಚ ಇಂಗ್ಲೀಷ್ ಭಾಷೆ, ಪ್ರಾಮಾಣಿಕವಾದ ನಿರೂಪಣೆ, ನಿಚ್ಚಳವಾದ ಜೀವನದರ್ಶನ ಈ ಕಾದಂಬರಿಗಳ ಶ್ರೇಷ್ಠ ಸಾಹಿತ್ಯದ ಮೌಲ್ಯಗಳು.

	1903ರಲ್ಲಿ ದಿ ಅನ್ ಟಿಲ್ಡ್ ಫೀಲ್ಡ್, 1905ರಲ್ಲಿ ದಿ ಲೇಕ್; ಮೆಮಾಯರ್ಸ್ ಆಫ್ ಮೈ ಡೆಡ್‍ಲೈಫ್ ಎಂಬ ಕೃತಿಗಳನ್ನು ಬರೆದ ಈತ 1906ರಲ್ಲಿ ಬೋಯರ್ ಯುದ್ಧದಿಂದ ಬ್ರಿಟಿಷ್ ರಾಜನೀತಿಯ ಬಗ್ಗೆ ಜುಗುಪ್ಸೆಗೊಂಡು ಲಂಡನ್ ಬಿಟ್ಟು ಐರ್ಲೆಂಡಿಗೆ ಹೋಗಿ ಕೆಲಕಾಲ ನೆಲಸಿದ. ಕಲೆಯಲ್ಲಿದ್ದ ಯೌವನೋತ್ಸಾಹ ಮರು ಕಳಿಸಿ ಪುನಃ ಲಂಡನ್ನಿಗೆ ಬಂದ. ಆಗ ಹೇಯ್ಸ್ ಆ್ಯಂಡ್ ಫೇರ್‍ವೆಲ್ (1911-14) ಮೂರು ಸಂಪುಟಗಳಲ್ಲಿ ಪ್ರಕಟವಾಯಿತು. ಮೂರ್‍ನ ಸೊಗಸಾದ, ಮನಮೋಹಕ ಸಂವಾದಗಳಿಗೆ ಈ ಕೃತಿ ಶ್ರೇಷ್ಠ ನಿದರ್ಶನ ಎಂದೆನಿಸಿತು. ಇದಕ್ಕಿಂತಲೂ ಶ್ರೇಷ್ಠವಾದ ನಿದರ್ಶನ ದಿ ಬ್ರೂಕ್ ಕೆರೆಶ್ (1916). ಹತ್ತು ವರ್ಷಗಳಲ್ಲಿ ಏಳು ಆವೃತ್ತಿಗಳನ್ನು ಕಂಡಿತು. ಇದನ್ನು ಇವನ ಗದ್ಯಮಹಾಕಾವ್ಯವೆನ್ನಬಹುದು.

	ಅವೊವಲ್ಸ್ (1919), ಕಾನ್ವರ್ಸೇಷನ್ಸ್ ಇನ್ ಎಬೂರಿ ಸ್ಟ್ರೀಟ್ (1924). ಹಿಲಾಯಿಸ್ ಅಂಡ್ ಏಬೆಲಾರ್ಡ್ (1921)-ಇವು ಸೊಗಸಾದ ಇಂಗ್ಲಿಷ್ ಗದ್ಯ ಮಾದರಿಗೆ ಹೆಸರಾದ ಕೃತಿಗಳು. ದಿ ಬ್ರೂಕ್ ಕೆರಿತ್ ಮತ್ತು ಹಿಲಾಯಿಸ್ ಅಂಡ್ ಏಬೆಲಾರ್ಡ್ ಕ್ರಿಸ್ತಜೀವನಕ್ಕೆ ಸಂಬಂಧಿಸಿದ ಕಾದಂಬರಿಗಳು. ಇವುಗಳನ್ನು ಬರೆಯುವ ಯೋಜನೆ ಹಾಕಿಕೊಂಡಾಗ ಈತ ಪ್ಯಾಲೆಸ್ಟೈನಿಗೆ ಹೋಗಿ ಸುತ್ತಮುತ್ತ ಪ್ರವಾಸಮಾಡಿ ಕ್ಷೇತ್ರಾಧ್ಯಯನ ಮಾಡಿದ್ದ. ಮೂರ್ ಕಲ್ಪಿಸಿದ ಕಥೆಯಲ್ಲಿ ಯೇಸು ಶಿಲುಬೆಗೇರಿದ ಮೇಲೆ ಸಾಯುವುದಿಲ್ಲ. ಮೂರ್ಛೆಹೋಗಿದ್ದವನನ್ನು ಸತ್ತನೆಂದು ಭಾವಿಸಿದ ಬಂಧುಮಿತ್ರರು ಬೇರೆಡೆಗೆ ಸಾಗಿಸಿದ ಮೇಲೆ ಚೇತರಿಸಿಕೊಂಡು ಮತ್ತೆ ಅಜ್ಞಾತನಂತೆ ಸಂಚರಿಸುತ್ತ ತನ್ನ ಶಿಷ್ಯ ಸಂತಪಾಲ್‍ನನ್ನು ಭೆಟ್ಟಿಯಾಗುತ್ತಾನೆ. ಆತ ಬರೆದಿಟ್ಟ ತನ್ನ ಬೋಧನೆಗಳೆಲ್ಲ ಅಪಾರ್ಥವಾಗಿ ವಿರೂಪಗೊಂಡಿರುವುದನ್ನು ಕಂಡು ವ್ಯಥೆಪಡುತ್ತಾನೆ. ಕಥೆ ಹೇಗಾದರೂ ಇರಲಿ ಈ ಕ್ರೈಸ್ತ ಕಥಾ ಕಾದಂಬರಿಗಳಲ್ಲಿ ಕಾಣುವ ಸುಂದರ ಕಲಾತ್ಮಕತೆ, ಘನತೆ, ಇಂಗ್ಲಿಷ್ ಗದ್ಯ ಅಪೂರ್ವವಾದವು. ಈ ಕಾದಂಬರಿಗಳನ್ನು ಓದುತ್ತಿದ್ದರೆ ಕ್ರಿಸ್ತನಕಾಲದ ವಾತಾವರಣದಲ್ಲೇ ಓಡಾಡಿದ ಅನುಭವವಾಗುತ್ತದೆ. ಮೂರ್‍ನ ಪ್ರತಿಭೆ ಇಲ್ಲಿ ಪೂರ್ಣವಾಗಿ ಪ್ರಕಾಶಗೊಂಡಿದೆ. ಇದೇ ಕಾಲದ ಎ ಸ್ಟೋರಿ ಟೆಲರ್ಸ್ ಹಾಲಿಡೇ (1918), ಡಾ ಫೆನಿಸ್ ಅಂಡ್ ಖ್ಲೊ (1924), ಮಧ್ಯಯುಗದ ಐರಿಷ್ ಕಥೆ ವಸ್ತುವಾಗಿರುವ ಯೂಲಿಕ್ ಅಂಡ್ ಸೊರಾಷಾ (1926)-ಇವು ಕೂಡ ಸೊಗಸಾದ ಕಾದಂಬರಿಗಳಾಗಿವೆ. ವರ್ಣಚಿತ್ರ ಕಲಾಚಾರ್ಯ ರೆಂಬ್ರಾಂಟ್‍ನ ನೋಟ್ ಬುಕ್‍ನಂತೆ ಕಲಾವಿದನ ಪ್ರತಿಭೆಯ ಹೊಳಹುಗಳನ್ನು ಇವು ಹಿಡಿದಿಟ್ಟಿವೆ.
	ವರ್ಣಚಿತ್ರಕಲೆ, ಕಾವ್ಯ, ಕಾದಂಬರಿ, ಸಂವಾದ ರೂಪಗಳಲ್ಲಿ ಕೈಯಾಡಿಸಿ ಅನುಭವಪಡೆದ ಈತ ನಾಟಕವನ್ನೂ ಬರೆಯುವ ಪ್ರಯತ್ನಮಾಡಿದ. ದಿ ಕಮಿಂಗ್ ಆಫ್ ಗೇಬ್ರಿಯಲ್ (1920) ನಾಟಕ ರಂಗದ ಮೇಲೆ ಪ್ರದರ್ಶಿತವಾಯಿತು. ಈತನ ಮೂರು ನಾಟಕಗಳಲ್ಲಿ ಇದು ಯಶಸ್ವಿಯಾದ ಮೊದಲ ನಾಟಕ. 1928ರಲ್ಲಿ ದಿ ಮೇಕಿಂಗ್ ಆಫ್ ಎನ್ ಇಮ್ಮಾರ್ಟಲ್ ಎಂಬ ನಾಟಕ ಬಂತು.

	ಭಾಷಾಪಾಂಡಿತ್ಯವಿಹೀನನೆಂಬ ಅಪವಾದಕ್ಕೆ ಗುರಿಯಾಗಿದ್ದ ಮೂರ್ ಸತತವಾದ ಪ್ರಯತ್ನದಿಂದ ಶ್ರೇಷ್ಠ ಇಂಗ್ಲಿಷ್ ಗದ್ಯಶಿಲ್ಪಿ ಎಂಬ ಹೆಸರು ಪಡೆದಿದ್ದಾನೆ. ಈತನ ಭಾಷೆ ಸರಳವಾದರೂ ಅಡೆ-ತಡೆಯಿಲ್ಲದೆ ನಿರರ್ಗಳವಾಗಿ ಹರಿಯುವ ಪ್ರವಾಹದಂತೆ. ಸಂವಾದ ಬರೆಹದಲ್ಲಿ ಈತ ಸಿದ್ಧಹಸ್ತನೆನಿಸಿದ. ಈತನದು ಸೂಕ್ಷ್ಮವಾದ ಸತ್ತ್ವಶಾಲಿ ಬರೆಹ. ಪದಗಳ ಜೋಡಣೆ ಲಯ ಗದ್ಯಕ್ಕೆ ಇಂಪನ್ನು ತಂದುಕೊಟ್ಟಿದೆ ಎಂದು ಪ್ರಶಂಸಿಸುವ ವಿಮರ್ಶಕರಿದ್ದಾರೆ. ಈತನ ಶೈಲಿ ಶುದ್ಧ ಒರಟು, ಸಂಸ್ಕಾರಗೊಳ್ಳದ ಭಾಷೆ, ಸತ್ಯದ ಬಗ್ಗೆ ಈತನಿಗೆ ನಿಷ್ಟೆ ಇಲ್ಲ. ಇವನ ಸಿಡುಕು ಸ್ವಭಾವ ಮತ್ತು ಕೀಳುತನಗಳು ಅಕ್ಷಮ್ಯ. ಇವನ ಕೃತಿಗಳು ನೀರಸವಾಗಿ ಬೇಸರ ತರಿಸುತ್ತವೆ ಎನ್ನುವವರೂ ಉಂಟು.

	ಡಬ್ಲ್ಯೂ.ಬಿ.ಯೇಟ್ಸ್ ಮತ್ತು ಎಡ್ವರ್ಡ್ ಮಾರ್ಟಿನ್‍ರೊಂದಿಗೆ ಐರಿಷ್ ಲಿಟರೆರಿ ಥಿಯೇಟರ್ ಸ್ಥಾಪನೆಗೆ ಮೂರ್ ಶ್ರಮಿಸಿದ. 1900ರಲ್ಲಿ ದಿ ಬೆಂಡಿಂಗ್ ಆಫ್ ದಿ ಬೊ ಎಂಬ ನಾಟಕವನ್ನು ರಂಗಭೂಮಿಗೆಂದೇ ಬರೆದು ಆಡಿಸಿದ. ಐರಿಷ್ ನವೋದಯಕ್ಕಾಗಿ ಯೇಟ್ಸ್, ಲೇಡಿ ಗ್ರೆಗೊರಿ ಮತ್ತು ಅಬ್ಬೆ ಥಿಯೇಟರಿನ ಮಿತ್ರರೊಡನೆ ಉತ್ಸಾಹದಿಂದ ಕೆಲಸಮಾಡಿದರೂ ಅನಂತರ ವಿರಸ ಕಟ್ಟಿಕೊಂಡ. ಈತ ತನ್ನ ಬರೆಹಗಳಿಂದ, ಸ್ವಭಾವ, ನಡೆ-ನುಡಿ-ಧೋರಣೆಗಳಿಂದ ವಿವಾದಾಸ್ಪದನಾದ ವ್ಯಕ್ತಿಯಾದರೂ ಈತನ ಕಾದಂಬರಿಗಳು ಇಂಗ್ಲಿಷ್ ಸಾಹಿತ್ಯಕ್ಕೆ ಹೊಸ ತಿರುವನ್ನು ಕೊಟ್ಟವು; ಅರ್ನಾಲ್ಡ್ ಬೆನೆಟ್‍ನಂಥ ಲೇಖಕರಿಗೆ ಸ್ಪೂರ್ತಿಯಿತ್ತವು.

	ಈತ ಸಾಹಿತ್ಯ ಕೃತಿಗಳನ್ನಲ್ಲದೆ ಮಾಡರ್ನ್ ಪೇಂಟಿಂಗ್, ರೆಮಿನಿಸೆನ್ಸಸ್ ಆಫ್ ದಿ ಇಂಪ್ರೆಷನಿಸ್ಟ್ ಪೇಂಟರ್ಸ್. ಇಂಪ್ರೆಷನ್ಸ್ ಅಂಡ್ ಒಪಿಯಿಯನ್ಸ್ ಎಂಬ ಕಲೆಗೆ ಸಂಬಂಧಿಸಿದ ಪುಸ್ತಕಗಳನ್ನೂ ಬರೆದಿದ್ದಾನೆ. ಈತ 1933ರಲ್ಲಿ ತನ್ನ ಎಂಬತ್ತೊಂದನೆಯ ಹುಟ್ಟು ಹಬ್ಬಕ್ಕೆ ಕೆಲವು ದಿನಗಳ ಮುಂಚೆ ಆಸ್ತಮಾ ರೋಗದಿಂದ ನಿಧನನಾದ. 			
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ